ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ (http://dli.gov.in/) ಭಾರತದ ಎಲ್ಲ ಭಾಷೆಗಳ ಪುಸ್ತಕಗಳನ್ನು ಇಂಟರ್ನೆಟ್ ಮೂಲಕ ಜನರಿಗೆ ತಲುಪಿಸುವ ಕೆಲಸ ಸಾಗಿದೆ. ಆದರೆ, ಇಲ್ಲಿರುವ ಪುಸ್ತಕಗಳನ್ನು ಆಯಾ ಭಾಷೆಯಲ್ಲೇ ಹುಡುಕುವ ಸವಲತ್ತು ಇಲ್ಲದಾಗಿದ್ದು, ಈ ಪುಸ್ತಕಗಳು ಜನರಿಗೆ ಸುಲಭವಾಗಿ ಸಿಗುತ್ತಿಲ್ಲ. ಓಸ್ಮಾನಿಯ ವಿಶ್ವವಿದ್ಯಾನಿಲಯದ ಡಿಜಿಟಲ್ ಲೈಬ್ರರಿಯ ಮಾದರಿಯಲ್ಲಿಯೇ ಡಿ.ಎಲ್.‌ಐ ನ ಪುಸ್ತಕ, ಲೇಖಕ ಹಾಗೂ ಪ್ರಕಾಶಕರ ಹೆಸರುಗಳನ್ನು ಕನ್ನಡೀಕರಿಸಲು ಈ ಯೋಜನೆಯನ್ನು ಪ್ರಾರಂಭಿಸುತ್ತಿದ್ದೇವೆ.

ಇದಕ್ಕೆ ಮುಖ್ಯ ಕಾರಣಗಳು:

  • ಎಲ್ಲ ಹೆಸರುಗಳು ಇಂಗ್ಲೀಷ್‌ನಲ್ಲಿರುವುದು (ಕಂಗ್ಲೀಷ್).
  • ಇಂಗ್ಲೀಷ್‌ನಲ್ಲಿರುವ ಹೆಸರುಗಳು ಸಾಮಾನ್ಯರು ಅರ್ಥವಾಗದ ರೀತಿಯಲ್ಲಿರುವುದು.
  • ಪ್ರಕಾಶಕ, ಲೇಖಕ ಅಥವಾ ಪುಸ್ತಕಗಳ ಹೆಸರೇ ತಪ್ಪಾಗಿ ಕಂಪ್ಯೂಟರೀಕರಗೊಂಡಿರುವುದು ಇತ್ಯಾದಿ.

ಈ ಪುಸ್ತಕಗಳನ್ನು ಕನ್ನಡಿಗರಿಗೆ ತಲುಪುವಂತೆ ಮಾಡಲು ಇವುಗಳನ್ನು ಯುನಿಕೋಡ್‌ ಶಿಷ್ಠತೆಯನ್ನು ಬಳಸಿ ಕನ್ನಡೀಕರಿಸುವುದರ ಜೊತೆಗೆ ಸುಲಭ ಸರ್ಚ್ ಸೌಲಭ್ಯದ ಮೂಲಕ ಸುಲಭವಾಗಿ ಸಿಗುವಂತೆ ಮಾಡುವುದಕ್ಕಾಗಿ ಸಮೂಹ ಸಂಚಯ ಈ ಯೋಜನೆಗೆ ಕೈ ಹಾಕಿದೆ.

ಈ ಯೋಜನೆ ಈ ಕೆಳಕಂಡ ಹಂತಗಳಲ್ಲಿ ನೆಡೆಯಲಿದೆ:

  • ಪುಸ್ತಕ, ಲೇಖಕ, ಪ್ರಕಾಶಕರ ಹೆಸರುಗಳ ಕನ್ನಡೀಕರಣ.
  • ಕನ್ನಡೀಕರಗೊಂಡ ಹೆಸರುಗಳ ಪರಿಶೀಲನೆ.
  • ಎಲ್ಲ ಪುಸ್ತಕ, ಲೇಖಕ ಹಾಗೂ ಪ್ರಕಾಶಕರನ್ನು ಸುಲಭವಾಗಿ 'ಪುಸ್ತಕ ಸಂಚಯ' ಯೋಜನೆಯ ಮೂಲಕ ಹುಡುಕಲು ಸಾಧ್ಯವಾಗಿಸುವುದು.
  • ಕನ್ನಡೀಕರಿಸಿದ ಪುಸ್ತಕಗಳಿಗೆ ಅವುಗಳದ್ದೇ ಆದ ವಿಕಿ ಪುಟಗಳನ್ನು ಕನ್ನಡ ವಿಕಿಪೀಡಿಯದಲ್ಲಿ ಹೆಣೆಯುವಂತೆ ಮಾಡುವುದು.
  • ವಿಕಿಪೀಡಿಯದಲ್ಲಿ ಈಗಾಗಲೇ ಲಭ್ಯವಿಲ್ಲದ ಲೇಖಕ/ಲೇಖಕಿಯರ ಪುಟಗಳು, ಕನ್ನಡ ಪುಸ್ತಕ ಪ್ರಕಾಶಕರ ಪುಟಗಳನ್ನೂ ಸೃಷ್ಟಿ ಮಾಡುವುದು.

* ಈಗಾಗಲೇ ಮುಕ್ತಾಯ ಗೊಂಡಿರುವ ಹಂತಗಳು | * ಕಾರ್ಯ ಪ್ರಗತಿಯಲ್ಲಿರುವ ಹಂತಗಳು | * ಮುಂದಿನ ಹಂತಗಳು